Thursday 1 September 2011

ಜೀವನ ವೃಕ್ಷ....


 ಸಂಭ್ರಮದ ಸೊಕ್ಕಿನಲಿ ತೂಗುತ್ತ, ಬೀಗುತ್ತ
ಶಾಶ್ವತದ ಭ್ರಮೆಯನ್ನು ತಲೆಯಲ್ಲಿ ಹೊತ್ತು 
ಸೆಟೆದು ನಿಂತಾ ಮರಕ್ಕೆ ಈಗ ಮುಸ್ಸಂಜೆಯಾ ಹೊತ್ತು /

ಕಾಲ ಕಬಂಧ ಹಸ್ತ ಎಲ್ಲೆಡೆ ಚಾಚಿದಾಗ 
ನಲುಗಿದ ಎಲೆಗಳು ಬಿಟ್ಟಗಲುವಾಗ 
ಜೀರ್ಣ ಬಾಹುಗಳ ಮೇಲೆಲ್ಲ ಅಳಿಸಲಾರದ ಗುರುತು /

ವೈಭವದ ಸಾಮ್ರಾಜ್ಯ ಕಳಚಿ ಬೀಳುವಾಗ
ರುಕ್ಷ ಜೀವನ ವೃಕ್ಷ ಉಮ್ಮಳಿಸುತಿದೆ ಮೈಮರೆತು,
ಅಪ್ಪಿ ನಿಂತ ಎಲೆಗಳು ತನ್ನವೆಂಬುದು ಬರಿ ಮಿಥ್ಯ 
ಅರಿವಾಗುವುದು ಯಾವಾಗ ಕ್ಷಣಿಕ ಬದುಕಿನಾ ಸತ್ಯ?/

ಜನ್ಮ-ರಸ-ಗಂಧಗಳ ರಸಪಾಕ ಈ ಜೀವನ
ವಸಂತದ ಅಮಲಿನಲಿ ಪ್ರಾಣಪುಷ್ಪದ ಜನನ
ಜೀವ ವೃಕ್ಷದ ತಂತುಗಳು ನೆಲದಾಳಕ್ಕೆ ಇಳಿದರೂ
                                                                ಮಣ್ಣಿನಾ ಬಲದೆದುರು ಎಲ್ಲವೂ ಬರೀ ಬಂಜರು /

ವಾಸನಾಮಯ ಮಣ್ಣಿನಲಿ, ಮಣ್ಣಿನ ಕಾಮನೆಯಲಿ 
ನಡೆದಿದೆ ಸಂಬಧಗಳ ಮಾರಣ ಹೋಮ!
ಮೂಕ ಸಾಕ್ಷಿಯ ತೆರದಿ ನಿಂತಿದೆ ಸಕಲ ಭೂವ್ಯೋಮ /

ಗಾಳಿ... ಬಿರುಗಾಳಿ... ಮಳೆ... ಮಿಂಚು... ಒಗ್ಗಿ ಹೋಗಿವೆ ಬದುಕಿಗೆ 
ವಂಚನೆಯ ಝಾಳಪಿನಲಿ, ಆಘಾತಗಳ ಸಿಡಿಲಿನಲಿ 
ಹಣ್ಣಾದ ಜೀವ ಕ್ಷಣಗಣನೆ ಮಾಡುತಿದೆ /

ದಿನ ನಿತ್ಯ ನವ ಮೃತ್ಯು ಶೋಧಿಸುತ, ತವಕಿಸುತ 
ಭಯದ ನೆರಳಿನಲಿ, ಭಯಾಣ ರೂಪದಲಿ 
ಬಾಗಿ ನಿಂತಿದೆ ಮರ ಬಿಸಿಲು ಬೆಂಗಾಡಿನಲಿ /

ಜೀವ-ಮರಣದ ಚಕ್ರ ಎಡೆಬಿಡದೆ ತಿರುಗುತಿದೆ 
ಮರಣ ನವಮಿಯ ಬೆನ್ನ ಹಿಂದೆಯೇ ದಿವ್ಯ ಅಂಕುರ ಮೂಡಿದೆ.....

(ಮರಾಟಿ ಕವನದ ಪ್ರೇರಣೆಯಿಂದ...)

Wednesday 31 August 2011

ಹೊಳೆ ದಂಡೆಯ ಮೇಲೆ ಜೇನು ಜಾತ್ರೆ...




ವಸಂತ ಋತು ಕಾಲಿಡುತ್ತಿದ್ದಂತೆಯೇ ಪ್ರಕ್ರತಿ ಮೈ ಕೊಡವಿಕೊಂಡು ಎದ್ದು ನಿಲ್ಲುತ್ತದೆ. ಅರಣ್ಯ ಪ್ರದೇಶದಲ್ಲಿ ರಂಗುರಂಗಿನ ಹೂಗಳು ಅರಳಿ ನಿಂತು ಭೂಮಾತೆಯ ಮುಡಿಯನ್ನು ಸಿಂಗರಿಸುತ್ತವೆ. ಆಗ ಹೂಗಳ ಮಕರಂದವನ್ನು ಹೀರಿ ಅದನ್ನು ಜೇನಾಗಿ ಪರಿವರ್ತಿಸುವ   ಕಾರ್ಯದಲ್ಲಿ ತೊಡಗುವ ಜೇನ್ನೋಣಗಳು ಎತ್ತರದ ಸ್ಥಳದಲ್ಲಿ ಗೂಡು ಕಟ್ಟುತ್ತವೆ.

ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನಲ್ಲಿ ಹರಿಯುವ ಬೇಡ್ತಿ ನದಿಯ ದಂಡೆಯ ಮೇಲಿರುವ ವ್ರಕ್ಷಗಳಲ್ಲಿ ಪ್ರತಿವರ್ಷ ಜೇನ್ನೋಣಗಳು ಅಸಂಖ್ಯ ಸಂಖ್ಯೆಯಲ್ಲಿ ಗೂಡುಗಳನ್ನು ಕಟ್ಟಿ ಜೇನು ಜಾತ್ರೆ ನಡೆಸುವಂತೆ ಭಾಸವಾಗುತ್ತದೆ. ನೀಲಾಕಾಶದಲ್ಲಿ ಮಧುಪಾತ್ರೆಗಳು ಗಾಳಿಗೆ ತೂಗುತ್ತಿರುವುದನ್ನು ನೋಡುವುದೇ ಕಣ್ಣಿಗೊಂದು ಹಬ್ಬ......


ಸಂಗಾತಿ.....

 ನೀ ಮುಳುಗುವಾಗ ನಾನು 
ನಿನ್ನೆಡೆಗೆ ಧಾವಿಸಿದ್ದೆ ... ಆದರೆ 
ಸಹಾಯಕ್ಕಾಗಿಯಲ್ಲ, ಜೊತೆ ನೀಡಲು.
ಏಕೆಂದರೆ.... ನನಗಾದರೂ ಎಲ್ಲಿ ಬರುತ್ತದೆ ಈಜಾಡಲು...!


ಭ್ರಮೆ...!!

        ಗಿಡದ ಎಲೆಯ ಮೇಲೆ ಹನಿಯುವನೀರು
        ಸ್ವತ: ತನ್ನನ್ನು ಸಾವರಿಸಿಕೊಂಡು ನಿಲ್ಲುತ್ತದೆ.
        ಮುತ್ತಿನ ಹಾಗೆ ಕಾಣುವ ಭ್ರಮೆಯಲ್ಲಿ
        ಹರಿಯುವ ಸಂಭ್ರಮವನ್ನೇ ಕಳೆದುಕೊಳ್ಳುತ್ತದೆ...!!