Thursday, 1 September 2011

ಜೀವನ ವೃಕ್ಷ....


 ಸಂಭ್ರಮದ ಸೊಕ್ಕಿನಲಿ ತೂಗುತ್ತ, ಬೀಗುತ್ತ
ಶಾಶ್ವತದ ಭ್ರಮೆಯನ್ನು ತಲೆಯಲ್ಲಿ ಹೊತ್ತು 
ಸೆಟೆದು ನಿಂತಾ ಮರಕ್ಕೆ ಈಗ ಮುಸ್ಸಂಜೆಯಾ ಹೊತ್ತು /

ಕಾಲ ಕಬಂಧ ಹಸ್ತ ಎಲ್ಲೆಡೆ ಚಾಚಿದಾಗ 
ನಲುಗಿದ ಎಲೆಗಳು ಬಿಟ್ಟಗಲುವಾಗ 
ಜೀರ್ಣ ಬಾಹುಗಳ ಮೇಲೆಲ್ಲ ಅಳಿಸಲಾರದ ಗುರುತು /

ವೈಭವದ ಸಾಮ್ರಾಜ್ಯ ಕಳಚಿ ಬೀಳುವಾಗ
ರುಕ್ಷ ಜೀವನ ವೃಕ್ಷ ಉಮ್ಮಳಿಸುತಿದೆ ಮೈಮರೆತು,
ಅಪ್ಪಿ ನಿಂತ ಎಲೆಗಳು ತನ್ನವೆಂಬುದು ಬರಿ ಮಿಥ್ಯ 
ಅರಿವಾಗುವುದು ಯಾವಾಗ ಕ್ಷಣಿಕ ಬದುಕಿನಾ ಸತ್ಯ?/

ಜನ್ಮ-ರಸ-ಗಂಧಗಳ ರಸಪಾಕ ಈ ಜೀವನ
ವಸಂತದ ಅಮಲಿನಲಿ ಪ್ರಾಣಪುಷ್ಪದ ಜನನ
ಜೀವ ವೃಕ್ಷದ ತಂತುಗಳು ನೆಲದಾಳಕ್ಕೆ ಇಳಿದರೂ
                                                                ಮಣ್ಣಿನಾ ಬಲದೆದುರು ಎಲ್ಲವೂ ಬರೀ ಬಂಜರು /

ವಾಸನಾಮಯ ಮಣ್ಣಿನಲಿ, ಮಣ್ಣಿನ ಕಾಮನೆಯಲಿ 
ನಡೆದಿದೆ ಸಂಬಧಗಳ ಮಾರಣ ಹೋಮ!
ಮೂಕ ಸಾಕ್ಷಿಯ ತೆರದಿ ನಿಂತಿದೆ ಸಕಲ ಭೂವ್ಯೋಮ /

ಗಾಳಿ... ಬಿರುಗಾಳಿ... ಮಳೆ... ಮಿಂಚು... ಒಗ್ಗಿ ಹೋಗಿವೆ ಬದುಕಿಗೆ 
ವಂಚನೆಯ ಝಾಳಪಿನಲಿ, ಆಘಾತಗಳ ಸಿಡಿಲಿನಲಿ 
ಹಣ್ಣಾದ ಜೀವ ಕ್ಷಣಗಣನೆ ಮಾಡುತಿದೆ /

ದಿನ ನಿತ್ಯ ನವ ಮೃತ್ಯು ಶೋಧಿಸುತ, ತವಕಿಸುತ 
ಭಯದ ನೆರಳಿನಲಿ, ಭಯಾಣ ರೂಪದಲಿ 
ಬಾಗಿ ನಿಂತಿದೆ ಮರ ಬಿಸಿಲು ಬೆಂಗಾಡಿನಲಿ /

ಜೀವ-ಮರಣದ ಚಕ್ರ ಎಡೆಬಿಡದೆ ತಿರುಗುತಿದೆ 
ಮರಣ ನವಮಿಯ ಬೆನ್ನ ಹಿಂದೆಯೇ ದಿವ್ಯ ಅಂಕುರ ಮೂಡಿದೆ.....

(ಮರಾಟಿ ಕವನದ ಪ್ರೇರಣೆಯಿಂದ...)

No comments:

Post a Comment